Job 27

1ಆಗ ಯೋಬನು ಮತ್ತೆ ಪ್ರಸ್ತಾಪಿಸಿ ಹೀಗೆಂದನು,

2<<ನನ್ನಲ್ಲಿ ಜೀವವು ಇನ್ನೂ ಪೂರ್ಣವಾಗಿದೆ,
ದೇವರು ಊದಿದ ಶ್ವಾಸವು ನನ್ನ ಮೂಗಿನಲ್ಲಿ ಇನ್ನೂ ಆಡುತ್ತಿದೆ (ಕೇಳಿರಿ)!
3ನನ್ನ ನ್ಯಾಯವನ್ನು ತಪ್ಪಿಸಿದ ದೇವರಾಣೆ,
ನನ್ನ ಆತ್ಮವನ್ನು ವ್ಯಥೆಪಡಿಸಿರುವ ಸರ್ವಶಕ್ತನಾಣೆ,

4ನನ್ನ ತುಟಿಗಳು ಅನ್ಯಾಯವನ್ನು ನುಡಿಯುವುದೇ ಇಲ್ಲ,

ನನ್ನ ನಾಲಿಗೆಯು ಎಂದಿಗೂ ಮೋಸದ ಮಾತುಗಳನ್ನಾಡುವುದಿಲ್ಲ.
5ನೀವು ನ್ಯಾಯವಂತರೆಂದು ನಾನು ಒಪ್ಪುವುದು ಅಸಾದ್ಯ.
ಸಾಯುವ ತನಕ ನನ್ನ ಯಥಾರ್ಥತ್ವವನ್ನು ಬಿಡುವುದಿಲ್ಲ.

6ನನ್ನ ನೀತಿಯನ್ನು ಎಂದಿಗೂ ಬಿಡದೆ ಭದ್ರವಾಗಿ ಹಿಡಿದುಕೊಳ್ಳುವೆನು.

ನನ್ನ ಜೀವಮಾನದ ಯಾವ ದಿನಚರಿಯಲ್ಲಿಯೂ, ಮನಸ್ಸಾಕ್ಷಿಯು ತಪ್ಪು ತೋರಿಸುವುದಿಲ್ಲ.

7ನನ್ನ ಹಗೆಗೆ ದುಷ್ಟನ ಗತಿಯಾಗಲಿ,
ನನ್ನ ವಿರುದ್ಧವಾಗಿ ಎದ್ದವನು ಅ ನಿತೀವಂತನ ಗತಿಯನ್ನು ಕಾಣಲಿ!

8ದೇವರು ಭ್ರಷ್ಟನ ಆತ್ಮವನ್ನು ಕಡಿದು ಎಳೆಯುವಾಗ,

ಅವನಿಗೆ ನಿರೀಕ್ಷೆಯೆಲ್ಲಿರುವುದು?
9ಅವನಿಗೆ ಶ್ರಮೆ ಬರಲು,
ದೇವರು ಅವನ ಮೊರೆಯನ್ನು ಆಲೈಸುವನೋ?
10ಅವನು ಸರ್ವಶಕ್ತನಲ್ಲಿ ಆನಂದಪಟ್ಟು,
ಆತನನ್ನು ಸರ್ವದಾ ಪ್ರಾರ್ಥಿಸುವನೇ?


11ನಾನು ಸರ್ವಶಕ್ತನ ಕ್ರಮವನ್ನು ಮರೆಮಾಡದೆ;

ದೇವರ ಹಸ್ತದ ಮಹಿಮೆಯ ವಿಷಯವನ್ನು ನಿಮಗೆ ಬೋಧಿಸುವೆನು.
12ಇಗೋ, ನೀವೆಲ್ಲರು ಸ್ವತಃ ನೋಡಿದ್ದೀರಿ;
ಏಕೆ ಇಂಥ ವ್ಯರ್ಥವಾದ ಆಲೋಚನೆಗಳನ್ನು ಮಾಡಿಕೊಳ್ಳುತ್ತೀರಿ?

13ದುಷ್ಟನಿಗೆ ದೇವರಿಂದ ದೊರೆಯುವ ಪಾಲೂ,

ಹಿಂಸಿಸುವವನಿಗೆ ಸರ್ವಶಕ್ತನಿಂದ ಸಿಕ್ಕುವ ಸ್ವಾಸ್ತ್ಯವೂ ಹೀಗಿರುತ್ತದೆ.
14ಅವನಿಗೆ ಮಕ್ಕಳು ಹೆಚ್ಚಿದರೆ ಕತ್ತಿಗೆ ತುತ್ತಾಗುವರು,
ಅವನ ಸಂತತಿಯವರಿಗೆ ಅನ್ನದ ಕೊರತೆ ತಪ್ಪದು.

15ಅವನ ಮನೆಯವರಲ್ಲಿ ಯಾರಾದರೂ ಉಳಿದರೆ ವ್ಯಾಧಿಯು ಅವರನ್ನು ಮಣ್ಣಿಗೆ ಸೇರಿಸುವುದು,

ಅವರ ವಿಧವೆಯರು ದುಃಖಕ್ರಿಯೆಗಳನ್ನು ನೆರವೇರಿಸುವುದಿಲ್ಲ.
16ಅವನು ಬೆಳ್ಳಿಯನ್ನು ಧೂಳಿನ ಹಾಗೆ ಹೇರಳವಾಗಿ ಕೂಡಿಸಿಟ್ಟು,
ವಸ್ತ್ರಗಳನ್ನು ಮಣ್ಣಿನಂತೆ ವಿಶೇಷವಾಗಿ ಸಿದ್ಧಮಾಡಿಕೊಂಡರೂ,
17ಆ ವಸ್ತ್ರಗಳನ್ನು ನೀತಿವಂತರು ಧರಿಸಿಕೊಳ್ಳುವರು.
ಆ ಬೆಳ್ಳಿಯನ್ನು ನಿರ್ದೋಷಿಗಳು ಹಂಚಿಕೊಳ್ಳುವರು.

18ಅವನು ಕಟ್ಟಿಕೊಂಡ ಮನೆಯು ಜೇಡರ ಹುಳದ ಗೂಡಿನಂತೆಯೂ,

ಕಾವಲುಗಾರನು ಹಾಕಿಕೊಂಡ ಮಂಚಿಕೆಯಂತೆಯೂ ದುರ್ಬಲವಾಗಿರುವುದು.
19ಅವನು ಧನಿಕನಾಗಿ ನಿದ್ರಿಸಿದರೂ ಮತ್ತೆ ನಿದ್ರೆಯನ್ನು ಕಾಣದೆ ಹೋಗುವನು,
ತನ್ನ ಕಣ್ಣನ್ನು ತೆರೆಯುತ್ತಲೇ ಎಲ್ಲವೂ ಮಾಯವಾಗುತ್ತದೆ.

20ವಿಪತ್ತಿನ ಹೊಳೆಗಳು ಅವನನ್ನು ಹಿಂದಟ್ಟಿ ಹಿಡಿಯುವವು,

ರಾತ್ರಿಯಲ್ಲಿ ಬಿರುಗಾಳಿಯು ಅವನನ್ನು ಅಪಹರಿಸುವುದು.
21ಮೂಡಣ ಗಾಳಿಯು ಕೊಚ್ಚಿಕೊಂಡು ಹೋಗುವುದರಿಂದ ಅವನು ಹಾರಿ ಹೋಗುವನು,
ಅದು ಅವನನ್ನು ಬಡಿದು ಅವನ ಸ್ಥಳದಿಂದ ದೂರಮಾಡುವುದು.

22ದೇವರು ಕರುಣೆ ಇಲ್ಲದೆ ಅವನ ಮೇಲೆ ತನ್ನ ಬಾಣಗಳನ್ನು ಎಸೆಯುತ್ತಲಿರುವನು,

ಅವನು ಆತನ ಕೈಯಿಂದ ತಪ್ಪಿಸಿಕೊಳ್ಳಲೇ ಬೇಕೆಂದಿರುವನು.
ಜನರು ಅವನನ್ನು ನೋಡಿ ಚಪ್ಪಾಳೆಹೊಡೆದು ಛೀಮಾರಿ ಹಾಕಿ,
ಆಚೆಗೆ ಹೊರಡಿಸುವರು.>>
23

Copyright information for KanULB